ಯುರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಉತ್ತರ ಐರ್ಲೆಂಡ್, ಸ್ಕಾಟ್‍ಲೆಂಡ್ ಸೇರಿದ ಸಂಯುಕ್ತ ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿ. ಗ್ರೇಟ್ ಬ್ರಿಟನ್ನಿನ ಐರ್ಲೆಂಡ್, ಸ್ಕಾಟ್‍ಲೆಂಡ್‍ಗಳಿಗಿಂತ ಹೆಚ್ಚು ವಿಶಾಲವಾದ ಇಂಗ್ಲೆಂಡ್‍ನಲ್ಲಿ ಥೇಮ್ಸ್‍ನದಿಯ ಎರಡೂ ದಂಡೆಗಳ ಮೇಲೆ ಹಬ್ಬಿರುವ ಪ್ರಸಿದ್ಧ ನಗರ. ವಿಸ್ತೀರ್ಣ 1596 ಚ.ಕಿಮೀ. ಜನಸಂಖ್ಯೆ: 63,78,600. ವರ್ಷದಲ್ಲಿ ಸು. 530 ಮಿಮೀ ಮಳೆ ಬೀಳುವ ಈ ಪ್ರಾಚೀನ ನಗರಕ್ಕೆ 2000ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಈ ನಗರ ಪ್ರವಾಸಿಗರ ಕಣ್ಮಣಿ ಎನಿಸಿದೆ. ಪ್ರತಿವರ್ಷ ಅಸಂಖ್ಯಾತ ಪ್ರವಾಸಿಗರು ಈ ನಗರವನ್ನು ನೋಡಲು ಬರುತ್ತಾರೆ. ಇಲ್ಲಿನ ಬಕ್ಕಿಂಗ್ ಹ್ಯಾಮ್ ಅರಮನೆ, ವೆಸ್ಟ್‍ಮಿನ್ಸ್ಟ್‍ರ್ ಚರ್ಚ್ ಹಾಗೂ ಲಂಡನ್ ಗೋಪುರ ಬಹು ಆಕರ್ಷಣೀಯವಾದವು. ಈಗಿನ ರಾಜಕುಮಾರಿ ಎರಡನೆಯ ಎಲಿಜûಬೆತ್ ಹಾಗೂ ಬ್ರಿಟಿಷ್ ರಾಜರುಗಳು ವಾಸವಿರುವುದು ಈ ಅರಮನೆಯಲ್ಲೆ. ವೆಸ್ಟ್‍ಮಿನ್ಸ್ಟ್‍ರ್ ಚರ್ಚಿನಲ್ಲೆ ಈಕೆಯ ಪಟ್ಟಾಭಿಷೇಕ ನಡೆಯಿತು. 43ರಲ್ಲಿ ಲಂಡನ್ ರೋಮನ್ನರ ವಾಣಿಜ್ಯ ಸಂಪರ್ಕ ಸ್ಥಳವಾಗಿ ಹುಟ್ಟಿಕೊಂಡಿತು. ಥೇಮ್ಸ್ ನದಿಯ ದಂಡೆಯ ಮೇಲೆ ರೋಮನ್ನರು ಕಟ್ಟಿದ ಈ ಬಂದರಿಗೆ ಲಂಡಿನಿಯಮ್ ಎಂದು ಹೆಸರಿಟ್ಟರು. ಮುಂದೆ ಅದೇ ಹೆಸರು ‘ಲಂಡನ್’ ಎಂದು ಪ್ರಸಿದ್ಧವಾಯಿತು. ಮುಂದೆ ಎರಡು ಪ್ರಾಚೀನ ನಗರಗಳಾದ ಲಂಡನ್ ಹಾಗೂ ವೆಸ್ಟ್‍ಮಿನ್ಸ್ಟ್‍ರ್ ನಗರಗಳನ್ನೊಳಗೊಂಡು ಬೆಳೆದಂತೆ ಮಹಾನಗರವಾಯಿತು. ಲಂಡನ್ ಸದಾ ಚಟುವಟಿಕೆಯಿಂದ ಕೂಡಿರುವ ಜೀವಂತ ನಗರ. ಲಂಡನ್‍ನಲ್ಲಿರುವ ಬ್ಯಾಂಕುಗಳು, ಜೀವವಿಮಾ ಕಂಪನಿಗಳು ಹಾಗೂ ಸಾಗಾಣಿಕೆ ಕಂಪನಿಗಳು ಪ್ರಪಂಚದ ಬಹುತೇಕ ದೇಶಗಳಲ್ಲಿ ತಮ್ಮ ಶಾಖೆಯನ್ನು ಹೊಂದಿವೆ. ಕ್ರಿ.ಶ. 410ರಲ್ಲಿ ಬಾರ್ಬೇರಿಯನ್ನರು ರೋಮಿನ ಮೇಲೆ ದಾಳಿ ಮಾಡಿದಾಗ ಇಂಗ್ಲೆಂಡಿನಲ್ಲಿದ್ದ ರೋಮ್ ಸೈನಿಕರನ್ನು ರೋಮಿನ ರಕ್ಷಣೆಗೆ ವಾಪಸ್ಸು ಕರೆಸಿಕೊಳ್ಳಲಾಯಿತು. ಆಗ ಲಂಡನ್ ಸ್ಥಳೀಯರ ಆಡಳಿತಕ್ಕೆ ಒಳಪಟ್ಟಿತು. 1665ರಲ್ಲಿ ಸು. 1ಲಕ್ಷ ಜನರು ಪ್ಲೇಗ್‍ನಿಂದ ಸತ್ತರು. ಮರದ ಕಟ್ಟಡ ಗಳಿಂದ ನಿರ್ಮಿತವಾಗಿದ್ದ ಅಂದಿನ ಲಂಡನ್ ಪಟ್ಟಣ 1666 ಸೆಪ್ಟಂಬರ್ 2ರಂದು ಉಂಟಾದ ಅಗ್ನಿದುರಂತಕ್ಕೆ ಬಲಿಯಾಯಿತು. ಇಷ್ಟಾದರೂ 1800ರಲ್ಲಿ ಒಂದು ಮಿಲಿಯನ್ ಪ್ರಜಾಸಂಖ್ಯೆಯುಳ್ಳ ಪ್ರಪಂಚದ ಬೃಹತ್ ನಗರ ಎಂದು ಹೆಸರು ಪಡೆಯಿತು. 1888ರಲ್ಲಿ ಜನಪ್ರತಿನಿಧಿಗಳ ಸರ್ಕಾರ ಅಸ್ತಿತ್ವಕ್ಕೆ ಬಂತು. 1940ರ ಸೆಪ್ಟಂಬರ್‍ನಿಂದ 1941ರ ಮೇ ವರೆಗೆ ಜರ್ಮನಿಯ ಬಾಂಬ್ ದಾಳಿಗೆ ಗುರಿಯಾಯಿತು.

ಸಾವಿರ ವರ್ಷಗಳ ಹಿಂದೆಯೇ ವೆಸ್ಟ್‍ಮಿನ್ಸ್ಟ್‍ರ್ ಪಟ್ಟಣವನ್ನು ನಗರವೆಂದು ಪರಿಗಣಿಸಲಾಯಿತು. ಇಂಗ್ಲೆಂಡ್‍ನ ಅರಸರು ಈಗಿನ ವೆಸ್ಟ್‍ಮಿನ್ಸ್ಟ್‍ರ್‍ನಲ್ಲಿ ಅರಮನೆಯನ್ನು ಕಟ್ಟಿದ್ದರಿಂದ ಇದು ಮತ್ತಷ್ಟು ಅಭಿವೃದ್ಧಿಯಾಯಿತು. ಪ್ರಾಚೀನ ಲಂಡನ್ ನಗರ  ವೆಸ್ಟ್‍ಮಿನ್ಸ್ಟ್‍ರ್‍ನಿಂದ 3 ಕಿಮೀ ದೂರದಲ್ಲಿತ್ತು. ಲಂಡನ್ ನಗರ ಇಂದು ಬೆಳೆದು ವೆಸ್ಟ್‍ಮಿನ್ಸ್ಟ್‍ರ್ ಪ್ರದೇಶ ಲಂಡನ್ನಿನ ಒಡಲೊಳಗೆ ಸೇರಿಹೋಯಿತು. ಕೇಂದ್ರ ಲಂಡನ್ ದೊಡ್ಡ ಕಟ್ಟಡಗಳಿಂದ, ವಸ್ತುಸಂಗ್ರಹಾಲಯ, ಗ್ರಂಥಾಲಯ ಮತ್ತು ಸುಂದರ ಉದ್ಯಾನವನಗಳಿಂದ ಕೂಡಿದೆ. ಥೇಮ್ಸ್ ನದಿ ಲಂಡನ್ ಮಹಾನಗರದ ಮಧ್ಯದಲ್ಲಿ ಪೂರ್ವ ದಿಕ್ಕಿನೆಡೆಗೆ ಹರಿದು ಲಂಡನ್‍ನಿಂದ 64 ಕಿಮೀ ದೂರದಲ್ಲಿರುವ ಉತ್ತರ ಸಮುದ್ರವನ್ನು ಡೋವರ್ ಜಲಸಂಧಿ ಬಳಿ ಸೇರುತ್ತದೆ. ಈ ನದಿಯೇ ಲಂಡನ್ ನಗರವನ್ನು ಪ್ರಪಂಚದ ಜಲಸಂಪರ್ಕ ಜಾಲದಲ್ಲಿ ಸೇರಿಸಿದೆ.

1963ರಲ್ಲಿ ಲಂಡನ್ ಸರ್ಕಾರದ ನಗರ ಆಡಳಿತಕಾಯಿದೆ ಮೇರೆಗೆ ಲಂಡನ್ ನಗರವನ್ನು 32 ಉಪಪಾಲಿಕಾ (ಬರೋಸ್) ಪ್ರದೇಶಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಪಾಲಿಕೆಯೂ ತನ್ನದೇ ಆದ ಆಡಳಿತ ವ್ಯವಸ್ಥೆ ಮಾಡಿಕೊಂಡಿದೆ. 26 ಚ.ಕಿಮೀ ವಿಸ್ತೀರ್ಣ ಹೊಂದಿರುವ ಕೇಂದ್ರಲಂಡನ್ ಪ್ರದೇಶವನ್ನು ‘ನಗರ’ ಎಂದು ಗುರುತಿಸಲಾಗುತ್ತದೆ. ಕೇಂದ್ರ ಲಂಡನ್ ನಗರವನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ: ದಿ ವೆಸ್ಟ್ ಎಂಡ್, ಸೌತ್ ಬ್ಯಾಂಕ್ ಮತ್ತು ದಿ ಸಿಟಿ. ದಿ ಸಿಟಿ ಮತ್ತು ವೆಸ್ಟ್ ಎಂಡ್ ಪ್ರದೇಶಗಳು ಥೇಮ್ಸ್ ನದಿಯ ಉತ್ತರ ಭಾಗದಲ್ಲೂ ಸೌತ್ ಬ್ಯಾಂಕ್ ಥೇಮ್ಸ್ ನದಿಯ ದಕ್ಷಿಣ ಭಾಗದಲ್ಲೂ ಬೆಳೆದಿವೆ. 2.6ಚ.ಕಿಮೀ ಇರುವ ದಿ ಸಿಟಿ ಪ್ರದೇಶದಲ್ಲಿ ಸುಮಾರು ಐದು ಸಾವಿರ ಜನರು ವಾಸವಾಗಿದ್ದರೂ ಲಂಡನ್ನಿನ ಈ ಭಾಗ ಹಗಲಿನ ಸಮಯದಲ್ಲಿ ಅತ್ಯಂತ ಬಿರುಸಿನ ವ್ಯಾಪಾರ-ವ್ಯವಹಾರ ಚಟುವಟಿಕೆಯಿಂದ ಕೂಡಿರುತ್ತದೆ. ಸು. 5 ಲಕ್ಷಕ್ಕೂ ವಿವಿಧ ಕಾರ್ಯನಿರತ ಜನರು ಇಲ್ಲಿಗೆ ಬರುವುದುಂಟು. ಪ್ರಮುಖ ವಹಿವಾಟು ಕಟ್ಟಡಗಳೂ ಹಾಗೂ ಕಛೇರಿಗಳೂ ಇಲ್ಲಿವೆ. ಪ್ರಾಚೀನ ಕಟ್ಟಡಗಳಲ್ಲಿ ಸೇಂಟ್‍ಪಾಲ್‍ಕತೀಡ್ರಲ್, ಗಿಲ್ಡ್‍ಹಾಲ್(1400), ಮ್ಯಾನ್ಸನ್ ಹೌಸ್(1700), ಮತ್ತು 1666 ರ ಅಗ್ನಿ ದುರಂತದ ನೆನಪಾಗಿ ಸ್ಥಾಪಿಸಿರುವ 62 ಮೀ ಎತ್ತರದ ಕಲ್ಲುಗಂಬ ಪ್ರಸಿದ್ಧವಾದುವು. 
ದಿ ವೆಸ್ಟ್‍ಎಂಡ್ ನಗರ ಪ್ರದೇಶದಲ್ಲಿ ಸರ್ಕಾರದ ಆಡಳಿತ ಕಟ್ಟಡಗಳು, ಸಗಟು ಮಾರುಕಟ್ಟೆ, ಮನರಂಜನ ಕೇಂದ್ರಗಳು ಹಾಗೂ ಸುಂದರ ವಾಸಗೃಹಗಳು ಇವೆ. ಈ ಪ್ರದೇಶದ ವಿಸ್ತೀರ್ಣ 18 ಚ.ಕಿಮೀ. ಇಲ್ಲಿ ಕಂಡುಬರುವ ಪ್ರಮುಖ ಕಟ್ಟಡಗಳೆಂದರೆ ಹೌಸ್ ಆಫ್ ಪಾರ್ಲಿಮೆಂಟ್, ವೈಟ್‍ಹಾಲ್ ಬ್ರಿಟಿಷ್ ಪ್ರಧಾನಿಯ ವಾಸಸ್ಥಳ ನಂ.10. ಡೌನಿಂಗ್ ಸ್ಟ್ರೀಟ್ ಮತ್ತು ಬ್ರಿಟಿಷ್ ರಾಜಮನೆತನದವರ ವಾಸಸ್ಥಳ ಬಕ್ಕಿಂಗ್ ಹ್ಯಾಮ್ ಅರಮನೆ.  

ಸೌತ್ ಬ್ಯಾಂಕ್ ಪ್ರದೇಶ 5 ಚ.ಕಿಮೀ ಇದ್ದು ಥೇಮ್ಸ್ ನದಿಯ ಅರ್ಧವೃತ್ತಾಕಾರದ ಒಳತಿರುವಿನ ಪ್ರದೇಶವನ್ನೊಳಗೊಂಡಿದೆ. ಈ ಪ್ರದೇಶ ನವೀನ ಸಂಸ್ಕøತಿಯ ತಾಣ. ಇಲ್ಲಿ ಚಿತ್ರಮಂದಿರಗಳು, ವಾದ್ಯ ಗೋಷ್ಠಿ ಮಂದಿರಗಳು, ವಸ್ತುಸಂಗ್ರಹಾಲಯ ಮುಂತಾದವುಗಳಿವೆ.

ಇಂದಿನ ಲಂಡನ್ ನಗರದಲ್ಲಿ ಹೆಚ್ಚಾಗಿ ವಲಸೆ ಬಂದಿರುವ ಜನರಿದ್ದಾರೆ. ಇಲ್ಲಿಯ ಪೂರ್ವಕಾಲದ ಲಂಡನ್ ಮೂಲನಿವಾಸಿಗಳನ್ನು ಕಾಕ್‍ನೀ ಜನರೆಂದು ಕರೆಯುತ್ತಾರೆ. ಇವರು ಇಲ್ಲಿನ ಪ್ರಾಚೀನ ಚರ್ಚಿನ ಗಂಟೆ ಸೆಂಟ್ ಮೇರಿ ಲಿ ಬೋ ನಾದ ಕೇಳಿ ಬರುವ ಸುತ್ತಲ ಪ್ರದೇಶದಲ್ಲಿ ಜನಿಸಿದ್ದವರನ್ನು ‘ಕಾಕ್‍ನೀ’ ಜನರೆಂದು ಕರೆಯುವರು. ವೆಸ್ಟ್ ಎಂಡ್ ಪ್ರಾಂತ್ಯದಲ್ಲಿ ಆಸ್ಟ್ರೇಲಿಯ, ಭಾರತ, ಪಾಕಿಸ್ತಾನ, ಪೋಲೆಂಡ್ ಮತ್ತು ವೆಸ್ಟ್‍ಇಂಡಿಸ್ ದೇಶಗಳಿಂದ ಬಂದ ವಲಸಿಗರೂ ಹೆಚ್ಚಾಗಿ ಯಹೂದ್ಯರೂ ನೆಲೆಸಿರುವರು.
ಲಂಡನ್ ನಗರದ ನಿವಾಸಿಗಳು ಚರ್ಚ್ ಆಫ್ ಇಂಗ್ಲೆಂಡ್‍ನ ಪ್ರಾಟೆಸ್ಟೆಂಟ್ ಮತ್ತು ಕೆಥೊಲಿಕ್ ಕ್ರೈಸ್ತರು. ಯಹೂದ್ಯರೂ ಇಸ್ಲಾಮ್ ಪಂಥದವರೂ ಇದ್ದಾರೆ. ಹೆಚ್ಚು ಜನಸಂದಣಿಯಿಂದ ಕೂಡಿರುವ ಲಂಡನ್ನಿನ ಪ್ರದೇಶ ಗಳೆಂದರೆ ಕ್ಯಾಮ್‍ಡೆನ್, ಐಲಿಂಗ್ಟನ್, ಹ್ಯಾಕ್ನಿ, ಸೌತ್‍ವರ್ಕ್, ಟವರ್ ಹ್ಯಾಮ್‍ಲೆಟ್ಸ್ ಮತ್ತು ಲ್ಯಾಮ್‍ಬೆತ್.

ಲಂಡನ್ ನಗರ ಪ್ರಾಚೀನ ಕಾಲದಿಂದಲೂ ವಿದ್ಯಾ ಕೇಂದ್ರವಾಗಿದೆ. ಇಲ್ಲಿನ ವಿದ್ಯಾಸಂಸ್ಥೆಗಳು ಉನ್ನತ ವಿದ್ಯೆ ಹಾಗೂ ಸಂಶೋಧನೆಗೆ ಹೆಚ್ಚು ಹೆಸರುವಾಸಿಯಾಗಿವೆ. ಅವುಗಳಲ್ಲಿ ಲಂಡನ್ ವಿಶ್ವವಿದ್ಯಾಲಯ, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯ ಪ್ರಸಿದ್ಧವಾದವು. ಫುಟ್‍ಬಾಲ್, ಕ್ರಿಕೆಟ್, ಗಾಲ್ಫ್, ಕುದುರೆ ರೇಸ್ ಮತ್ತು ಟೆನ್ನಿಸ್ ಇಲ್ಲಿಯ ಜನಪ್ರಿಯ ಕ್ರೀಡೆಗಳು. ವರ್ಷಕ್ಕೊಮ್ಮೆ ನಡೆಯುವ ವಿಂಬಲ್‍ಡನ್ ಟೆನ್ನಿಸ್ ಕ್ರೀಡೆ ಪ್ರಪಂಚಪ್ರಸಿದ್ಧ. ಬ್ರಿಟನ್ ರಾಯಲ್ ನ್ಯಾಷನಲ್ ಥಿಯೇಟರ್ ಕಂಪನಿ, ರಾಯಲ್ ಷೇಕ್‍ಸ್ಪಿಯರ್ ಕಂಪನಿ ಪ್ರಪಂಚಪ್ರಸಿದ್ಧ ನಾಟಕ ಕಂಪನಿಗಳು. ಬಿಬಿಸಿ, ಸಿಂಪೋನಿ, ರಾಯಲ್ ಫಿಲ್ ಆರ್ಮೋನಿಯ ಮತ್ತು ಲಂಡನ್ ಫಿಲ್ ಆರ್ಮೋನಿಕ್ ಪ್ರಮುಖ ವಾದ್ಯಗೋಷ್ಠಿಗಳು. ಕ್ವೀನ್ ಎಲಿಜಬೆತ್ ಹಾಲ್, ರಾಯಲ್ ಹಾಲ್, ಬರ್ಟ್ ಹಾಲ್ ಮತ್ತು ರಾಯಲ್ ಒಪೆಲ್ ಹೌಸ್ ಇವು ಪ್ರಸಿದ್ಧ ರಂಗಮಂಟಪಗಳು. ನ್ಯಾಷನಲ್ ಗ್ಯಾಲರಿ, ಥೇಬ್ ಗ್ಯಾಲರಿ, ವಾಲೆಸ್ ಕಲೆಕ್ಷನ್, ರಾಯಲ್ ಅಕಾಡೆಮಿ ಮತ್ತು ಅವಾರ್ಡ್‍ಗ್ಯಾಲರಿ, ಬ್ರಿಟಿಷ್ ಮ್ಯೂಸಿಯಮ್ ಇವು ಪ್ರಸಿದ್ಧ ವಸ್ತುಸಂಗ್ರಹಾಲಯಗಳು. ಲಂಡನ್ನಿನ ಬ್ರಿಟಿಷ್ ಗ್ರಂಥಾಲಯ ಪ್ರಪಂಚಪ್ರಸಿದ್ಧವಾದದ್ದು. ವಿಕ್ಟೋರಿಯ ಮ್ಯೂಸಿಯಮ್, ಆಲ್ಬರ್ಟ್ ಮ್ಯೂಸಿಯಮ್, ದಿ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್, ಸೈನ್ಸ್ ಮ್ಯೂಸಿಯಮ್ ಮತ್ತು ಮ್ಯೂಸಿಯಮ್ ಆಫ್ ಲಂಡನ್-ಇವು ಪ್ರಾಚೀನ ಕಲೆ ಹಾಗೂ ಸಂಸ್ಕøತಿಯ ದ್ಯೋತಕವಾಗಿವೆ. ಸುಂದರವಾದ ಅರಮನೆಗಳು ಲಂಡನ್ ನಗರದ ಮತ್ತೊಂದು ವೈಶಿಷ್ಟ್ಯ. ಇವುಗಳೆಂದರೆ ಸೇಂಟ್ ಜಾನ್ ಅರಮನೆ, ಬಕ್ಕಿಂಗ್ ಹ್ಯಾಮ್ ಅರಮನೆ, ಕೆಂಟನ್ ಅರಮನೆ ಮತ್ತು ಹ್ಯಾಮರ್‍ಟನ್ ಅರಮನೆ.

ಥೇಮ್ಸ್ ನದಿಯ ದಡದಲ್ಲಿರುವ ನ್ಯೂ ಪ್ಯಾಲೇಸ್ ಆಫ್ ವೆಸ್ಟ್‍ಮಿ ನ್ಸ್ಟ್‍ರ್ ಕಟ್ಟಡದಲ್ಲಿ ಬ್ರಿಟಿಷ್ ಲೋಕಸಭಾ ಅಧಿವೇಶನ ನಡೆಯುವ ಸ್ಥಳ. ಹೌಸ್ ಆಫ್ ಕಾಮನ್ಸ್ ಮತ್ತು ಹೌಸ್ ಆಫ್ ಲಾಡ್ರ್ಸ್ ಎಂಬುವು ಬ್ರಿಟನ್ ದೇಶದ ಕೆಳಮನೆ ಮತ್ತು ಮೇಲ್ಮನೆಗಳಾಗಿವೆ. ಈ ಅರಮನೆ 1800ರಲ್ಲಿ ಕಟ್ಟಿದ್ದು, 1834ರಲ್ಲಿ ಬೆಂಕಿಗೆ ಆಹುತಿಯಾಗಿ ಪುನರ್‍ನಿರ್ಮಾಣ ಗೊಂಡಿದೆ. 1859ರಲ್ಲಿ ನಿರ್ಮಿಸಿದ ಬಿಗ್‍ಬೆನ್ ಇಲ್ಲಿನ ಪ್ರಸಿದ್ಧ ಗಂಟೆಗೋಪುರ. ಪ್ರಪಂಚದ ಎರಡನೆಯ ಮಹಾಯುದ್ಧದಲ್ಲಿ ಹೌಸ್ ಆಫ್ ಕಾಮನ್ಸ್ ಕಟ್ಟಡ ಜರ್ಮನಿಯ ಬಾಂಬ್ ದಾಳಿಯಿಂದ ವಿಕೃತಗೊಂಡು ಪುನರ್‍ನಿರ್ಮಾಣವಾಗಿದೆ. ಲಂಡನ್ ನಗರದ ಪ್ರಮುಖ ಚರ್ಚುಗಳೆಂದರೆ ಸೇಂಟ್‍ಪಾಲ್ ಕತೀಡ್ರಲ್ ಮತ್ತು ವೆಸ್ಟ್‍ಮಿನ್ಸ್ಟ್‍ರ್ ಚರ್ಚ್. ಸೇಂಟ್‍ಪಾಲ್ ಕತೀಡ್ರಲ್ 1666ರಲ್ಲಿ ಬೆಂಕಿಗೆ ತುತ್ತಾಗಿತ್ತು. ಈ ಕತೀಡ್ರಲ್‍ನ ಗೋಪುರ 111 ಮೀ ಎತ್ತರವಾಗಿದೆ. ಇದನ್ನು ಸರ್‍ಕ್ರಿಸ್ಟೋಫರ್ ರೇನ್ ಎಂಬ ಕಟ್ಟಡ ವಿನ್ಯಾಸಗಾರ ಪುನರ್‍ನಿರ್ಮಾಣ ಮಾಡಿದ (1675-1710). ಲಂಡನ್ ಬ್ರಿಡ್ಜ್ ಮತ್ತೊಂದು ಪ್ರಸಿದ್ಧ ನಿರ್ಮಾಣ. ವೆಸ್ಟ್‍ಮಿನ್ಸ್ಟ್‍ರ್ ಚರ್ಚ್ 900 ವರ್ಷಗಳಷ್ಟು ಹಳೆಯದಾಗಿದ್ದು 1903 ರಲ್ಲಿ ಇದನ್ನು ನವೀಕರಿಸಲಾಗಿದೆ. 1805ರಲ್ಲಿ ನಡೆದ ಟ್ರಾಫಲ್ಗರ್ ಕದನದಲ್ಲಿ ಸ್ಪೇನ್ ಮತ್ತು ಫ್ರೆಂಚರ ಮೇಲೆ ಬ್ರಿಟಿಷರಿಗೆ ಜಯ ತಂದುಕೊಟ್ಟ ಅಡ್ಮಿರಲ್ ಹೊರೇಸಿಯೊ ನೆಲ್ಸನ್‍ನ ಪ್ರತಿಮೆಯನ್ನುಳ್ಳ ಹಾಗೂ ಬ್ರಿಟಿಷ್‍ರ ಜಯದ ನೆನಪಾಗಿ ಕಟ್ಟಿರುವ ಸುಂದರವೂ ಪ್ರಸಿದ್ಧವೂ ಆದ ಟ್ರಾಫಲ್ಗರ್ ಚೌಕವಿದೆ. ಇಲ್ಲಿ ನೆಲ್ಸನ್ನ್‍ನ ಶಿಲಾಮೂರ್ತಿಯನ್ನು 52 ಮೀ ಎತ್ತರದ ಕಲ್ಲಿನ ಕಂಬದ ಮೇಲೆ ನಿಲ್ಲಿಸಲಾಗಿದೆ. ಬೆಲ್‍ಫೋರ್ಟ್, ಬರ್ಕ್‍ಲೀ, ಹಾಗೂ ರಸೆಲ್ ಚೌಕಗಳೂ ಸೇಂಟ್‍ಜಾನ್ ಪಾರ್ಕ್, ಗ್ರೀನ್‍ಪಾರ್ಕ್, ಐರ್‍ಪಾರ್ಕ್, ಕಿಂಗ್‍ಸ್ಟನ್ ಹಾಗೂ ರೀಜೆಂಟ್ ಪಾರ್ಕ್ ಮುಂತಾದ ಉದ್ಯಾನವನಗಳೂ ಇಲ್ಲಿವೆ.	

(ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ